May 16, 2008

ಪುಟ್ಟಿಯ ಕಥೆಗಳು


ಪುಟ್ಟಿ ಪುಟ್ಟನ ಕೈಹಿಡಿದು ನಿದ್ರೆ ಮಾಡ್ತಾ ಇದ್ಲು. ಪುಟ್ಟಿಯ ಮುಖವನ್ನೇ ಕಣ್ಣಲ್ಲಿ ತುಂಬಿಕೊಂಡ ಪುಟ್ಟ ನಿದ್ರೆ ಹೋಗಿದ್ದ. ನಿಧಾನಕ್ಕೆ ಪುಟ್ಟನ ಕೈಯಿಂದ ತನ್ನ ಕೈ ಕಳಚಿಕೊಂಡೆದ್ದ ಪುಟ್ಟಿ ಕಿಟಕಿಯಲ್ಲಿ ನಿಂತಿದ್ದಳು ಮರದಲ್ಲಿನ ಹಳದಿಯ ಹೂವುಗಳಿಂದ ನೆಲವನ್ನು ಮೆದುವಾಗಿ ಪುಟ್ಟನಿಗೆಚ್ಚರವಾಗದಂತೆ ಮುತ್ತಿಡುತ್ತಲಿದ್ದ ಮಳೆಹನಿಗಳನ್ನೇ ನೋಡುತ್ತಾ . ಪುಟ್ಟನ ನಿದ್ರೆಯೊಳಗಿಂದ ಹೊರಬರುತ್ತಿದ್ದ ಉಸಿರು ಪುಟ್ಟಿಯ ಮನದೊಳಕ್ಕಿಳಿದು ಪುಟ್ಟಿಯ ಮೌನಕ್ಕೆ ಜತೆಯಾದವು.


ಆಕ್ಟೋಬರ್ ತಿಂಗಳು ಕಳೆದೇ ಹೋಯ್ತು. ಆವತ್ತು ಪುಟ್ಟಿ ಪುಟ್ಟನ ಹುಟ್ಟು ಹಬ್ಬಕ್ಕೆ ವಿಶ್ ಮಾಡೋದನ್ನೇ ಮರೆತಿದ್ಲು. ದಿನ ಕಳೆದು ಮರಗಳಲ್ಲಿ ಮೇ ಫ್ಲವರ್ ಅರಳಿತ್ತು.
ಆ ದಿನಗಳ ಒಂದು ಸುಂದರ ಮುಂಜಾವಿನಲ್ಲಿ ಪುಟ್ಟಿಯ ಮೊಬೈಲಿಂದ ಎಂದೋ ರೆಕಾರ್ಡ್ ಆಗಿದ್ದ ಪುಟ್ಟನ ಧ್ವನಿ ರಿಂಗಣಿಸಿತು "ಹ್ಯಾಪೀ ಬರ್ಥ್ ಡೇ ಕಣೇ ಪುಟ್ಟೀ....." ಅಂತ.
ಪುಟ್ಟಿಯ ಕಣ್ಣಂಚು ತೇವವಾಗಿ ನಗುವ ಹನಿಯೊಂದು ಪಿಸುಗುಟ್ಟಿತು "ನಿಂಗೆ ನನ್ ಮೇಲೆ ಬೇಜಾರಿಲ್ಲ ತಾನೇ ಪುಟ್ಟಣ್ಣಾ?" ಮೊಬೈಲನ್ನೆ ಮುತ್ತಿಕ್ಕಿದಳು ಪುಟ್ಟನ ಅಪ್ಪಿಕೊಂಡಂತೆ.



ಪುಟ್ಟ ಪುಟ್ಟಿಯನ್ನ ಕೇಳ್ತಾ ಇದ್ದ " ಮೆಸ್ ಬಿಲ್ ಕಟ್ಬೇಕು, ಒಂದು ರೂಪಾಯಿ ಕಡ್ಮೆ ಇದೆ, ಕೊಡ್ತೀಯಾ ಪುಟ್ಟೀ..."
ಪುಟ್ಟಿ ಹೇಳಿದ್ಲು "ಇಲ್ಲ ಕಣೋ...ನನ್ ಹತ್ರ" ಪುಟ್ಟಿ ಕೊಡ್ಲಿಲ್ಲ.
"ಇವತ್ತು ಒಂದು ರೂಪಾಯಿ ಗಳಿಸ್ಕೋ...ನಾಳೆ ಅಂಥ ಲಕ್ಷರೂಪಾಯಿ ಸಂಪಾದಿಸೋ ಮಾರ್ಗ ಸಲೀಸಾಗಿ ಕಾಣಿಸುತ್ತೆ." ಅಂತ ಪುಟ್ಟಿಯ ಕಣ್ಣುಗಳು ಪುಟ್ಟನ್ನ ಹಾರೈಸ್ತಾ ಇದ್ವು. ಪುಟ್ಟಿಯ ಕಣ್ಣುಗಳನ್ನೇ ಅಮಾಯಕನಾಗಿ ನೋಡುತ್ತ ನಿಂತಿದ್ದ ಪುಟ್ಟ "ಸರಿ ಕಣೇ..." ಅಂದವನು ಅವಳ ಕಣ್ಣುಗಳಿಂದಾಚೆ ಮರೆಯಾಗಿಬಿಟ್ಟ. ಪುಟ್ಟಿಯ ಕಣ್ಣುಗಳು ಪುಟ್ಟನ ಬೆನ್ನಟ್ಟಿಹೋದವು ಪುಟ್ಟನ ಕೈಯಲ್ಲಿ ಕಡಿಮೆಯಿರುವ ಒಂದು ರೂಪಾಯಿಯನ್ನು ಹುಡುಕುತ್ತಾ.

May 8, 2008

ಇರುವುದೆಲ್ಲವ ಬಿಟ್ಟು.......

ಯಾರಲ್ಲೋ ಜನನ, ಎಲ್ಲೊ ಇರುವ ಯಾರಿಗಾಗಿಯೋ ಕಾದು, ಎಲ್ಲೋ ಸೇರಬೇಕಾದವರು ಮತ್ತೆಲ್ಲೋ ಸೇರಿ, ಯಾರೋ ತಿಳಿಯದವರೊಬ್ಬರಿಗಾಗಿ ಯಾರೆಂದೂ ಅರಿಯದ ಯಾರ್ಯಾರೋ ನಡುವೆ ಯಾಂತ್ರಿಕ ಉಸಿರಾಟದೊಂದಿಗಿನ ಪ್ರಶ್ನಾರ್ಥಕ ಬದುಕು.

ನಿಂತು ನಿಂತು ಸೋತು ಸೋರಿ ಸೊರಗಿ ಇಂಗಿ ನೆಲವ ತಣಿಸಲಿದ್ದ ನೀರು ಭರಭರನೆ ಎಣೆಯಿಲ್ಲದೆ ಧುಮುಕುವ ಮಳೆಯೊಟ್ಟಿಗೆ ಸಾಗಿ ಸಾಗರ ಸೇರಿ ಬಯಲೊಳಗೆ ನಿರಾಳವಾಗಿ ಹರಿದು ಇಂಗಲಿದ್ದ ನೀರು ಸಾಗರದಾಳದಿ ಉಸಿರುಗಟ್ಟಿ ಕೊನೆಯುಸಿರೆಳೆಯಬಹುದೇ? ಸಾಗರದೊಟ್ಟಿಗೆ ಬೆಸೆದುಹೋಗಿ ಹೊಸಜನ್ಮತಳೆದು ನಿರಂತರ ಅಲೆಯಾಗಬಹುದೇ? ಎಲ್ಲೆಲ್ಲೂ ಪ್ರಶ್ನೆಗಳು, ಪ್ರಶ್ನಾರ್ಥಕ ಬದುಕು.

ಮರುಳುಮನಸು, ಕ್ಷಣಕೊಬ್ಬರ ನೆನಪು, ಕ್ಷಣದಲ್ಲಿ ನೆನೆದವರ ಕಾಣುವ ಹಂಬಲ, ಕಂಡೊಡನೆ ಇನ್ನೊಬ್ಬರ ನೆನಪು, ಕಾಣುವ ಹಂಬಲ. ಎದುರಿದ್ದವರ ಬೆಲೆ ಅರಿಯುವುದು ಇನ್ನಿಲ್ಲವಾದಾಗ. ಎಲ್ಲರೂ ಬೇಕು ಇಲ್ಲವಾದಾಗ. ಯಾರೂ ಬೇಡವಾಗುತ್ತಾರೆ ಎಲ್ಲರೂ ಇರುವಾಗ. ಇನ್ನೊಮ್ಮೆ ಬೇಕಾಗುತ್ತಾರೆ ಏನೂ ಇಲ್ಲವಾದಾಗ, ಯಾರೂ ಬೇಡವಾಗುತ್ತಾರೆ ಎಲ್ಲವೂ ಇರುವಾಗ, ಇನ್ನೊಮ್ಮೆ ಬೇಕಾಗುತ್ತಾರೆ ಏನೂ ಇಲ್ಲವಾದಾಗ! ಬದುಕು ಪ್ರಶ್ನಾರ್ಥಕವಾದಾಗ. ಹುಚ್ಚುಮನಸ್ಸು ಹುಚ್ಚು ಆಸೆಗಳ ಶಿಖರವೇರುತ್ತದೆ. ಯಾಕಾಗಿ? ಪ್ರಶ್ನೆ ಮತ್ತೊಂದು. ಹುಚ್ಚುಮನಸ್ಸು ಹುಚ್ಚಿನ ಶಿಖರ ಕಾಣುತ್ತದೆ, ಅಲ್ಲಿಂದ ನೆಗೆವ ಕನಸು ಕಾಣುತ್ತದೆ, ಕನಸಿನಲ್ಲೆ ಕೊನೆಕಾಣುತ್ತದೆ, ನನಸುಗಳೆಲ್ಲ ಶಿಖರಕ್ಕಿಂತಲೂ ತುತ್ತತುದಿಯಲ್ಲಿ ಕಾಣಿಸುತ್ತಲಿರುತ್ತವೆ. ಮತ್ತೊಮ್ಮೆ ಹತ್ತಿರವಾದಂತೆ ಭಾಸ. ಬೆನ್ನಟ್ಟಿ ಗಾಳಿಯಲ್ಲಿ ಓಡುತ್ತದೆ ನನಸಿನ ಬೆನ್ನು ಹತ್ತುವ ಅತಿರೇಕ ಹುಚ್ಚು.

ಹಿತ್ತಲಿನ ಗಿಡದ ಹಸಿರೆಲೆ ನಗುತ್ತದೆ ಯಾರನ್ನು ನೋಡಿ? ಯಾರನ್ನೂ ನೋಡಿ ನಗುವುದಿಲ್ಲ, ಎಲ್ಲ ಭ್ರಮೆ. ಯಾರಿಗಾಗಿಯೂ ಯಾರೂ ಯಾರೊಂದಿಗೂ ನಗುವುದಿಲ್ಲ. ಅವರಿಗಾಗಿ ಅವರು ನಗುತ್ತಾರೆ, ಉಸಿರಾಡುತ್ತಾರೆ, ಕೊನೆಯಲ್ಲಿ ಯಾರಿಗಾಗಿಯೋ ಯಾರೂ ಸಾಯುವುದಿಲ್ಲ. ಎಲ್ಲ ಅವರವರಿಗಾಗಿ ಹೊರತು ಪರರಿಗಲ್ಲ. ನೋವಿನ ಕಾಳನ್ನೇ ಹೆಕ್ಕಿ ಹೆಕ್ಕಿ ಉಣ್ಣುವ ಹಕ್ಕಿಗೆ ಸಾವಿನಲ್ಲೂ ಇರುವುದಿಲ್ಲವೇನೋ ಸುಖ. ಸಾವು? ಯೋಚನೆ ಇನ್ನಷ್ಟು. ಹೌದು, ಸತ್ತಾಗ ಯಾರ್ಯಾರು ಸಿಗಬಹುದು? ಸಾವಿನೊಳಗೆ ಮತ್ತೊಂದು ಸಾವಿದ್ದರೆ? ಆಗ ಸತ್ತರೂ ಮತ್ತೆ ಬದುಕಿದಂತಲ್ಲವೆ? ಸತ್ತವರಿಗಾಗಿ ಸಾವ ಕಂಡವರು ಸುಖದಲ್ಲಿ ಮೆರೆಯುತ್ತಿರಬಹುದೆ? ಸತ್ತವರಿಗಾಗಿ ಸಾವ ಕಂಡವರು ಸೇರಬೇಕಾದವರನ್ನು ಸೇರಿರಬಹುದೆ? ತಿಳಿಯನ್ನೆಲ್ಲ ಸುರುಳಿ ಸುರುಳಿಯಾಗಿ ಕಲಕಿಕೊಳ್ಳುತ್ತದೆ ಮರುಳು ಮನಸ್ಸು.

ಹುಚ್ಚುಮನಸ್ಸು ಕೈಯಿಂದ ಬರೆಸುತ್ತದೆ. ಕೈ ಬರೆಯುವುದರೊಳಗೆ ಮನಸು ಮತ್ತೇನನ್ನೋ ಯೋಚಿಸಿ ಕೈ ಬರೆಯುತ್ತಲಿರುವುದನ್ನೇ ಮರೆತು ಯೋಚಿಸುತ್ತದೆ. ಆದರೂ ಕೈ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ, ಎಲ್ಲವೂ ವಿಪರ್ಯಾಸವೆನಿಸಿ ಬಿಡುತ್ತದೆ. ಓದಿದಾಗ "ಹುಚ್ಚು ಬರಹಗಳು" ಎದ್ದು ಕಂಡಾಗ ನಗುತ್ತದೆ ಮರುಳು ಮನಸ್ಸು. ಒಮ್ಮೆ ಹುಚ್ಚು ಮನಸ್ಸೇ ನೇರ ಹಾಳೆಯ ಮೇಲೆ ಬರೆದಿದ್ದರೆ! ಒಂದು ನಗುವಿನೊಂದಿಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ನಿನ್ನೆ ಕಂಡವರನ್ನೆ ನಾಳೆ ಕಾಣಬಯಸುವುದು ಮರುಳು ಮನಸ್ಸು. ಬೇರೊಬ್ಬರನ್ನು ಕಾಣಿಸುವುದು ವಿಧಿಯ ವಾಸ್ತವತೆ. ನಿನ್ನೆ ಇದ್ದವರು ಇಂದಿಲ್ಲ. ಇಂದಿದ್ದವರು ನಾಳೆಯಿಲ್ಲ. ನಾಳೆ ಕಾಣುವವರು ಹಿಂದೆ ಕಂಡವರೇ ಆಗಿರುವುದಿಲ್ಲವಲ್ಲ! ಹೋಗಿ ಬರುತ್ತೇನೆ ಎನ್ನುವಾಗ ಅಳುತ್ತದೆ ಹುಚ್ಚು ಮನಸ್ಸು. ನಗುತ್ತಿರುವ ಇಂದಿನ ಮನಸ್ಸು ‘ಅಳುವೆನ್ನುವುದಿದೆ’ಯೆನ್ನುವುದನ್ನೇ ಮರೆತು ನಗುತ್ತದೆ. ನಾಳೆಯನ್ನೆಲ್ಲ ನಿನ್ನೆಯನ್ನಾಗಿಸುವ ಇಂದಿನ ಇಂದು ನಕ್ಕ ಮನಸುಗಳೆಲ್ಲ ನಗುವುದು ದುಗುಡ ಮರೆಯುವುದಕ್ಕಾಗಿಯೇನೋ ಎನಿಸಿಬಿಡುತ್ತದೆ. ನಾಳೆಯ ಗಂಭೀರತೆಗೆ ಕಾಲಿಡುವಾಗಲೂ ನಗುತ್ತ ಒಳಗೊಳಗೆ ಅಳುತ್ತದೆ ಮರುಳು ಮನಸ್ಸು. ತನ್ನ ಗೂಡಿಗೆ ತಾನು ತೆರಳುವಾಗಲೂ ‘ಹೋಗಿ ಬರುತ್ತೇನೆ’ಎನ್ನುವಾಗ ಅಳುತ್ತದೆಯೇಕೆ ಹುಚ್ಚು ಮನಸ್ಸು!
ಬದುಕೆಂದರೆ ಇವಿಷ್ಟೇ ಆಗಿರಬಹುದೆ?

ಪ್ರಶ್ನೆಗಳೇ ಸುರಿಯುವಾಗ ಉತ್ತರಕ್ಕಾಗಿ ಏಕಾಂಗಿತನಕ್ಕೆ ಮೊರೆಹೊಕ್ಕುತ್ತದೆ ಮರುಳುಮನಸ್ಸು. ಅಲ್ಲಿ ಶೂನ್ಯವು ಮನದ ತುಮುಲಗಳಿಗೆ ಸ್ಪಂಧಿಸುತ್ತದೆ. ಜಗತ್ತಿನ ಜನರಲ್ಲಿ ಒಬ್ಬರ ನೆನಪಾದರೂ ಸಾಕು, ಶೂನ್ಯದಿಂದ ಬಯಲಿಗೆ ಬೀಳುತ್ತದೆ ಮರುಳು ಮನಸ್ಸು. ಶೂನ್ಯದಲ್ಲಿ ಕಂಡಿದ್ದೂ ಸಹ ಬಯಲಲ್ಲಿ ಕಾಣದಾದಾಗ ಕೊರಗುವ ಹುಚ್ಚುಮನಸ್ಸುಗಳೇ ಹೆಚ್ಚು.

"ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿಯುವುದೇ ಜೀವನ" ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿಯುವುದು ಮನಸು ಕೂಡ ಎಂದೆನಿಸಿಬಿಡುತ್ತದೆ. ಅಲ್ಲವೆ? ಮತ್ತೆ ಪ್ರಶ್ನೆಯೇ ಪ್ರಶ್ನಾರ್ಥಕವಾದಾಗ ಬದುಕು ಪ್ರಶ್ನಾರ್ಥಕ.

*****************************************************************************

[೧೯೯೭ರಲ್ಲಿ ಬರೆದದ್ದಂತೂ ನೆನಪು. ದಿನಾಂಕ ನೆನಪಿಲ್ಲ. ಮರಳುತ್ತಲಿರುವ ಇಂದಿಗೆ ಸೂಕ್ತವೆನಿಸಿದ್ದರಿಂದ ಹಾಳೆಯ ಧೂಳುಕೊಡವಿ ಅದರಲ್ಲಿದ್ದ ಅಕ್ಷರಗಳನ್ನು ಬ್ಲಾಗಲ್ಲಿ ಚೆಲ್ಲಿದ್ದೇನೆ]
{ನಾ ಬರೆದ ಅಕ್ಷರಗಳಿರುವ ಕಾಗದದ ತುಣುಕುಗಳನ್ನೂ(ಕೈಗೆ ಸಿಕ್ಕಷ್ಟವುಗಳನ್ನು) ಮಮತೆಯಿಂತ ಜೋಪಾನ ಮಾಡಿದ ಅಪ್ಪ-ಅಮ್ಮರಿಗೆ ನಾ ಆಭಾರಿ}

March 20, 2008

ಮರಳುವ ಮೊದಲು

ನಾ ಕಲಿತ ವಿಶ್ವವಿದ್ಯಾಲಯದ ನೆನಪು ಇಂದು ಮರುಕಳಿಸುತ್ತಿದೆ. ಸುಂದರ ಮುಂಜಾವು. ತಿಳಿಗುಲಾಬಿ ಬಣ್ಣದ ಅಂಚಿಗೆ ಹಾಲಿನ ಬಣ್ಣದ ಮೈಯ್ಯುಳ್ಳ ಸೀರೆಯೊಂದನ್ನು ಕಷ್ಟಪಟ್ಟು ಸುತ್ತಿಕೊಂಡು ಹೊರಟಾಗ ಯಾವುದೋ ಕಂಪನ ಮೈಯನ್ನ ಆವರಿಸಿತ್ತು. ತಿರು ತಿರುಗಿ ನಕ್ಕ ಹಾಸ್ಟೆಲ್ ರೂಂ ಮೇಟ್ ಹೇಳಿದ್ದಳು "ಸಿಂಪಲ್ಲಾಗೇ ಸೆಳೆದುಬಿಡ್ತೀಯ" ಅಂತ ನಕ್ಕಿದ್ದಳು. ಅವಳನ್ನೊಮ್ಮೆ ಗುರಾಯಿಸಿ ‘ತಮಾಷೆ ಸಾಕು’ ಅಂತ ನಸುನಕ್ಕು ಸೆಮಿನಾರ್ ಬಗೆಗಿನ ನನ್ನ ಟೆನ್ಷನ್ ಅವಳೆದುರು ಹೇಳಿಕೊಂಡು ಸುಮ್ಮನೆ ನಡೆದಿದ್ದೆ.
ವಿಶ್ವವಿದ್ಯಾಲಯದಲ್ಲಿನ ಗೆಸ್ಟ್ ಹೌಸ್ ಪಕ್ಕದ ಕಾನ್ಫರೆನ್ಸ್ ಹಾಲ್ ಭಾರತದ ಸುಮಾರು ೬೦ ವಿಶ್ವವಿದ್ಯಾಲಯಗಳಿಂದ ನೆರೆದ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರು, ವಿಧ್ಯಾರ್ಥಿಗಳಿಂದ ತುಂಬಿಕೊಂಡು ನಳನಳಿಸುತ್ತಿತ್ತು.
ನಮ್ಮ ವಿಶ್ವವಿಧ್ಯಾಲಯದಿಂದ ‘ಜ್ಯೂನಿಯರ್ ಜಿಯಾಗ್ರಫರ್’ ಅಂತ ಆಯ್ಕೆಯಾಗಿದ್ದ ನಾನು ಕಾನ್ಫರೆನ್ಸಿನ ಮೊದಲ ದಿನವಾದ ಅಂದು ಸೆಮಿನಾರ್ ಕೊಡುವುದಿತ್ತು. ಅದೆಷ್ಟೋ ದಿನಗಳಿಂದ ತಯಾರಿ ನಡೆಸಿಕೊಂಡಿದ್ದ ಸೆಮಿನಾರ್ ಅರ್ಧಗಂಟೆಯಲ್ಲಿ ಮುಗಿದೇ ಹೋಗಿದ್ದು ಮನ್ಸೆಲ್ಲ ಖಾಲಿ ಖಾಲಿ ಅನಿಸಿತ್ತಾದರೂ ‘ಹೇಗಿತ್ತೋ ಏನೋ’ ಎಂದು ಭಯವೂ ಸುತ್ತಿಕೊಳ್ಳುತ್ತಲಿತ್ತು. ಸೆಮಿನಾರ್ಗೆ ನನ್ನನ್ನು ಸಿದ್ಧಗೊಳಿಸಿದ ನನ್ನ ಪ್ರೀತಿಯ ಗುರುವರ್ಯರ ಕಣ್ಣಿನ ಪ್ರೀತಿಯನ್ನ ಅರಸಿ ಅವರು ಸ್ಟೇಜಿನ ಮೇಲಿದ್ದುದರಿಂದ ದೂರದಿಂದಲೆ ಮುಗುಳ್ನಗೆಯೊಂದರಿಂದ ವಂದಿಸಿ ಚಹದ ಕಪ್ ಒಂದನ್ನು ಕೈಯಲ್ಲಿ ಹಿಡಿದು ಕಾನ್ಫರೆನ್ಸ್ ಹಾಲ್ ಇಂದ ಹೊರಗೆ ಬಂದು ಮೆಟ್ಟಿಲೊಂದರ ಮೇಲೆ ಕುಳಿತೆ. ಅರ್ಧಗಂಟೆಕಾಲ ಕಟ್ಟಿಹೋದಂತಿದ್ದ ಉಸಿರಿಗೆ ಸ್ವಾತಂತ್ರ್ಯ ಸಿಕ್ಕಿತ್ತು .
ಆಗಲೇ ಅವನು ಬಂದು ಎಷ್ಟೋ ದಿನದ ಪರಿಚಯವೆಂಬಂತೆ ಪಕ್ಕಕ್ಕೆ ಕುಳಿತಿದ್ದ. "ಸೆಮಿನಾರ್ ಚೆನ್ನಾಗಿತ್ತು" ಅಂದ. ಉಸಿರು ತಾಕುವಷ್ಟು ಪಕ್ಕ ಬಂದು ಕುಳಿತಿದ್ದವನಿಗೆ ಉತ್ತರಿಸಲು ಸ್ವಲ್ಪ ಮುಜುಗರವಾಯ್ತಾದರೂ ಮುಗುಳ್ನಕ್ಕೆ. ಕೊಂಚ ಭಯ ಕೂಡ. ಆತ್ಮೀಯತೆ ಕೂಡ ಇಣುಕಲಿಲ್ಲ ಅವನು ನನಗೆ ತೋರಿಸಿದಷ್ಟು .ವಿಷಯವೆಂದರೆ ಅವನು ಭಾರತೀಯನಾಗಿರಲಿಲ್ಲ,

ತಾನು ಭೂಗೋಳಶಾಸ್ತ್ರ ವಿಷಯದ ರಿಸರ್ಚ್ ವಿಧ್ಯಾರ್ಥಿಯಾಗಿದ್ದು ನಾನಂದು ಸೆಮಿನಾರ್ ಕೊಟ್ಟ ವಿಷಯವೇ ಅವನ ರಿಸರ್ಚಿನ ವಸ್ತುವೆಂದೂ ತಿಳಿಸಿದ. ಆ ವಿಷಯದ ಅಧ್ಯಯನದ ಸಲುವಾಗಿ ಕಿರು ಅವಧಿಗಾಗಿ ತಾನು ಭಾರತಕ್ಕೆ ಬಂದಿರುವುದಾಗಿಯೂ ಹೇಳಿದನಲ್ಲದೆ ಅದೇ ವಿಷಯದ ಕುರಿತಾಗಿ ಇನ್ನಷ್ಟು ಮಾಹಿತಿ ನೀಡಿದ ಅವನ ಮಾತುಗಳಿಗೆ ಸ್ಪಂಧಿಸುವಷ್ಟು ಜ್ಞಾನ ನನ್ನದಾಗಿರಲಿಲ್ಲ. ಅಲ್ಲದೆ ಐದು ನಿಮಿಷಗಳ ಕಾಲ ಉಸಿರಾಡಿಕೊಳ್ಳಲು ಹೊರಬಂದವಳನ್ನು ಅವನು ಹದಿನೈದು ನಿಮಿಷಗಳ ಕಾಲ ಹೊರಗೆ ನಿಲ್ಲಿಸಿಬಿಟ್ಟಿದ್ದ. ಒಳಗೊಳಗೇ ಚಡಪಡಿಸುತ್ತಿದ್ದವಳನ್ನು ಅರ್ಥೈಸಿಕೊಂಡವನಂತೆ ಮುಗುಳ್ನಕ್ಕು ‘ಕಾರ್ಯಕ್ರಮದತ್ತ ತೆರಳೋಣ ಬಾ’ ಎಂದವನೇ ಕಾನ್ಫರೆನ್ಸ್ ಹಾಲ್ ಒಳಗೆ ನುಸುಳಿ ಮಾಯವಾಗಿದ್ದ.
ನಂಬಿದರೆ ನಂಬಿ, ಬಿಟ್ಟರೆ ಬಿಡಿ ಅಂತೂ ಹತ್ತು ದಿನಗಳ ವರ್ಕ್ ಶಾಪ್ ಮುಗಿಯುವುದರೊಳಗೆ ಹಿಂದೆಯೇ ಸುಳಿದಾಡುತ್ತ ಮುಗುಳ್ನಗುತ್ತಿದ್ದವನು ತನ್ನ ಮನದಿಚ್ಛೆಯನ್ನೆಲ್ಲ ಮುಂದಿಟ್ಟು ಕ್ರಮೇಣ ಮನವನಾವರಿಸಿಕೊಂಡುಬಿಟ್ಟಿದ್ದ. ಆರು ತಿಂಗಳು ಕಾಲ ನಮ್ಮ ಡಿಪಾರ್ಟ್ ಮೆಂಟಿನಲ್ಲಿಯೇ ರಿಸರ್ಚ್ ಸಲುವಾಗಿ ನಿಂತಿದ್ದ. ನನ್ನಿಷ್ಟದ ವಿಷಯದ ಬಗ್ಗೆ ಅವನಿಗಿರುವ ಅತೀವ ಜ್ಞಾನ ಹಾಗೂ ಆಸಕ್ತಿ ನನ್ನನ್ನು ಅವನೊಂದಿಗೆ ಕಟ್ಟಿಹಾಕಿಬಿಟ್ಟಿತ್ತು. ನನ್ನ ಜಾತಿಯ ಯಾವ ಹುಡುಗನಿಗೆ ಇವನು ಕಮ್ಮಿ? ಅಂತನಿಸಿಬಿಟ್ಟಿದ್ದ. ಎಲ್ಲಕ್ಕೂ ಮಿಗಿಲಾಗಿ ಅವನ ಸರಳತೆ, ಒಳ್ಳೆಯತನ ನನ್ನನ್ನು ಪೂರ್ತಿ ನುಂಗಿಕೊಂಡುಬಿಟ್ಟಿತ್ತು.
ಮನೆಯಲ್ಲಿ ವಿಷಯವಿಟ್ಟೆ ಸಂಪೂರ್ಣ ನಿರ್ಧಾರ ತೆಗೆದುಕೊಳ್ಳುವುದರೊಳಗೆ. ಮನೆಯಲ್ಲಿ ಯಾರೂ ಒಪ್ಪಲಿಲ್ಲ ಮಾಂಸ ತಿನ್ನುವ ಅದರಲ್ಲೂ ಪರದೇಸಿಗನೊಬ್ಬನನ್ನು ಮದುವೆಯಾಗಲು.
ಅವನು ತನ್ನ ದೇಶಕ್ಕೆ ಹೊರಟು ನಿಂತಾಗ ನಾನವನೊಂದಿಗೆ ಹೊರಟು ನಿಂತದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಅವನೂ ಸಹ ನನ್ನನ್ನು ಬಿಟ್ಟು ಹೋಗಲಾರೆನೆಂದು ಹಠ ತೊಟ್ಟಿದ್ದ. ಏನೇನೋ ಕೊಸರಾಡಿ ಪಾಸ್ಪೋರ್ಟ್ ಅಲ್ಲಿ ಅವನ ಬಾಳಸಂಗಾತಿಯೆನಿಸಿಕೊಂಡ ನಾನು ವಿಸಾ ಪಡೆದವಳು, ನನ್ನವರು ಎಂಬ ಎಲ್ಲರನ್ನು ತೊರೆದು ಅವನೊಂದಿಗೆ ಹಾರಿ ಅವನ ನೆಲದಲ್ಲಿ ಬಂದಿಳಿದಿದ್ದೆ.

ಈ ಮಾತಿಗೆ ಎರಡು ವರ್ಷಗಳೇ ಸಂದುಹೋದವು. ಇಂದು ಬೆಳಿಗ್ಗೆ ಅವನಿಂದ ಡಿವೋರ್ಸ್ ಸಿಕ್ಕಿತು. ಕಾರಣ ನೀವಂದುಕೊಂಡಂತೆ ಅವನಿಗೆ ಇನ್ನೊಬ್ಬಳು ಗರ್ಲ್ ಫ್ರೆಂಡ್ ಇಲ್ಲ. ಭಾರತೀಯಳಾಗಿ ಹೇಳಬೇಕೆಂದರೆ ಅವನು "ಶ್ರೀರಾಮಚಂದ್ರ."

ಮೊದ ಮೊದಲು ಪ್ರೀತಿಯೆದುರು ಕೊರತೆಗಳ್ಯಾವುವೂ ಕಾಣಿಸಲಿಲ್ಲ. ಜೀವನ ನಾನಂದುಕೊಂಡಷ್ಟು ಕಷ್ಟವಿಲ್ಲವೆನಿಸಿದ್ದಂತೂ ನಿಜ. ಆದರೆ ನಿಜವಾದ ಕೊರತೆಯೊಂದಿತ್ತು ನನಗೆ ನಾನೇ ತಂದಿತ್ತುಕೊಂಡಿದ್ದು, ನನ್ನ ಪ್ರೀತಿಯ ಕುಟುಂಬವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೆ, ಅವರೊಂದಿಗೆ ಫೋನಾಯಿಸಿ ಮಾತನಾಡುವ ನೈತಿಕ ಹಕ್ಕನ್ನೂ ಕಳೆದುಕೊಂಡಿದ್ದು ದಿನ ಕಳೆದ ಹಾಗೆ ಬೃಹದ್ ಕೊರತೆಯಾಗಿ ನನ್ನನ್ನ ನರಳಿಸತೊಡಗಿದ್ದು, ಎಷ್ಟೆಂದರೆ ಹುಚ್ಚಿಯಾಗಿಬಿಡುವಷ್ಟು.

ಕಾರಣಗಳು ವೈಯಕ್ತಿಕ. ಅವು ನಮ್ಮಿಬ್ಬರ ವೈಯಕ್ತಿಕ ಅಂತಲೂ ಅನಿಸೋಲ್ಲ. ನನ್ನೊಬ್ಬಳ ವೈಯಕ್ತಿಕ ಅನಿಸುತ್ತವೆ. ಅವನು ಇನ್ನೂ ನನ್ನನ್ನು ಆರಾಧಿಸುತ್ತಾನೆ ಅಂತ ಗೊತ್ತಿದೆ. ನನ್ನಲೂ ಅಷ್ಟೆ, ಗೋಪುರದಷ್ಟು ಪ್ರೀತಿಯಿದೆ ಅವನಿಗಾಗಿ. ಕಳಚಿರದ ಕೊಂಡಿಯನ್ನು ಕಡಿದುಕೊಂಡು ಬರಬೇಕಿದೆ.
ಅಪ್ಪ-ಅಮ್ಮನ ನೆನಪು ಬೆಳಕಿನ ಕಿರಣಗಳ ಜೊತೆ ಹುಟ್ಟಿಕೊಂಡರೆ ಚಂದ್ರ ಮಾಯುವತನಕವೂ ಮಾಗುವುದಿಲ್ಲ. ಸಂಜೆ ದೇವರಿಗೆ ನಾನಂಟಿಸಿದ ದೀಪ ಅವನು ಬಂದ ತಕ್ಷಣ ಅವನ ಕೈಲಿರುವ ಫೈಲು ಅಪ್ಪಳಿಸುವ ರಭಸಕ್ಕೆ ಮುರುಟಿ ಆರಿ ಹೋದ ಕಮಟು ನನ್ನೊಳಗಿಳಿದು ಮುಸು ಮುಸು ಅಳುತ್ತದೆ. ವಾರಾಂತ್ಯಗಳಲ್ಲಿ ಅವನ ತಂದೆ-ತಾಯಿಗಳ ಜೊತೆ ಅವರ ಮನೆಯಲ್ಲಿ ಕಳೆಯುವುದು ನರಕ ಅಂತ ನಾನೇನೂ ಹೇಳುತ್ತಿಲ್ಲ. ಮೀಟಿನ ಕಮಟು ನನ್ನ ತರಕಾರಿಗಳ ರುಚಿಯನ್ನೂ ನುಂಗಿ ವಾರಾಂತ್ಯ ಪೂರ್ತಿ ಉಪವಾಸ ನರಳುತ್ತೇನೆ. ಸದಾ ಊಟದ ತಟ್ಟೆಯೊಂದಿಗೆ ಚಾಕು-ಫೋರ್ಕುಗಳನ್ನು ನೋಡುವಾಗ ಅಜ್ಜನ ಊಟದ ಬಟ್ಟಲಿನ ಎಡಗಡೆಯಲ್ಲಿರುತ್ತಿದ್ದ ತೀರ್ಥದ ತಟ್ಟೆಚಮಚಗಳು ಕಣ್ಣೆದುರು ಬಂದು ಕಂಬನಿ ಹನಿಸುತ್ತವೆ.
`ಪ್ರೀತಿ ಗೆಲ್ಲುತ್ತದೆ' ಎಂಬ ಮಾತನ್ನು ನಂಬಿ ಎಲ್ಲರನ್ನು ತೊರೆದು ಬಂದಿದ್ದೆ. ಈಗನ್ನಿಸುತ್ತದೆ ಪ್ರೀತಿಯನ್ನು ಗೆದ್ದರೆ ಎಲ್ಲವನ್ನೂ ಸೋಲಬೇಕಾಗುತ್ತದೆ ಅಂತ.
ಅವನು ನನ್ನೊಡನೆ ಬರಲಾರ, ಅವನಿದ್ದರೆ ನನ್ನವರು ನನ್ನನ್ನು ಸುತಾರಾಂ ಸೇರಿಸೋಲ್ಲ. ಇದೇ ಕಾರಣಗಳಿಂದ ಹಿಂದೊಮ್ಮೆ ಹುಟ್ಟಿದ ಮಾತು ಇಂದು ಡಿವೋರ್ಸ್ ಅಲ್ಲಿ ಅಂತ್ಯಗೊಂಡಿತು. ಈಗೊಂತರ ಮನುಷ್ಯ ಮುಟ್ಟಿದ ಗುಬ್ಬಿಯ ಹಾಗಾಗಿ ಬಿಟ್ಟಿದ್ದೇನಾದರೂ ಮರಳಿ ಬಂದು ನನ್ನವರನ್ನೆಲ್ಲ ಕೂಡಿಕೊಳ್ಳುವ ತವಕ ಹೆಚ್ಚುತ್ತಿದೆ. ನನ್ನವರೆಲ್ಲ ನನ್ನ ಸೇರಿಸಿಕೊಂಡಾರು ಎಂಬೊಂದು ಚಿಕ್ಕ ಆಸೆಯಿದೆ. ಅವರನ್ನೆಲ್ಲ ಬರಸೆಳೆದು ಅಪ್ಪಿಕೊಂಡು ಕ್ಷಮೆಯಾಚಿಸಿ ಬಿಕ್ಕುವ ಕನಸೊಂದಿದೆ.
ನನ್ನ ನೆಲದಲ್ಲಿಯೇ ಹೋಗಿಳಿದು ಆ ಮಣ್ಣಿನಲ್ಲಿಯೇ ಮಲ್ಲಿಗೆ ಬಳ್ಳಿಯೊಂದನ್ನು ನೆಟ್ಟು ಹೂ ಬಿಡಿಸಿ ನನ್ನವರನ್ನೆಲ್ಲ ಕರೆದು ತೋರಿಸಿ ನಗುವ ಹಂಬಲ ವಿಪರೀತ ಕಾಡುತ್ತಿದೆ. ಎಷ್ಟೆಂದರೆ ನನ್ನ ಬದುಕಾದ ನನ್ನ ಡ್ಯಾನಿಯೊ ಎಂಬ ಮರುಳು ಹುಡುಗನನ್ನು ತೊರೆದು ಬರುವಷ್ಟು.

ಡಿವೋರ್ಸ್ ಸಿಕ್ಕ ಮೆಲೂ ಅವನು ನನ್ನನ್ನು ಕಾಡುವಂತೆ ನಿಟ್ಟುಸಿರುಬಿಡುತ್ತಿದ್ದಾನೆ. ಕೈಯೊಡ್ಡಿ ಬೇಡಿಕೊಳ್ಳುತ್ತಿದ್ದಾನೆ. ಕಣ್ನೋಟದಲ್ಲೇ ‘ಬಿಟ್ಟು ಹೋಗ್ತೀಯಾ?’ ಅಂತ ಗೋಗರೆಯುತ್ತಾನೆ.ನನ್ನನ್ನು ಅಲುಗಿಸಿ ಅಲುಗಿಸಿ ಕೇಳುತ್ತಾನೆ ‘ಬಿಟ್ಟು ಹೋಗುವಂಥ ತಪ್ಪು ನಾನೇನು ಮಾಡಿದ್ದೇನೆ ಹೇಳು, ತಿದ್ದಿಕೊಳ್ಳುತ್ತೇನೆ’ ಅಂತ. ಬಾಯಿಬಿಟ್ಟು ಹೇಗೆ ಹೇಳಲಿ ನಿನ್ನ ಬದುಕಿನ ರೀತಿ-ನೀತಿಗಳು ನಂಗಿಷ್ಟವಾಗ್ತಿಲ್ಲ’ ಅಂತ! ‘ಮಾಂಸ ತಿನ್ನೋದು ಡಿವೋರ್ಸ್ ಮಾಡುವಂಥ ತಪ್ಪಾ’ ಅಂತ ನನ್ನನ್ನ ಕೆಳಗಿಟ್ಟು ನೋಡಿದರೆ! ‘ನಂಗೆ ನನ್ನವರೆಲ್ಲರ ಜೊತೆಯಲ್ಲಿರಬೇಕೆನ್ನಿಸುತ್ತೆ, ಬರ್ತೀಯಾ?’ ಅಂತ ಮಾತ್ರ ಕೇಳಿ ಸುಮ್ಮನಾಗುತ್ತೇನೆ. ಕುಳಿತಲ್ಲೇ ಕೂರಲಾರದೇ ಚಡಪಡಿಸಿ ಕೈಯಲ್ಲಿನ ಫೈಲನ್ನೇ ಮುಖಕ್ಕೆ ಮುಚ್ಚಿಕೊಳ್ಳುತ್ತಾನೆ, ಹಾಗಾಗಿ ಅವನ ಕಣ್ಣೀರು ನನಗೆ ಕಾಣಿಸುತ್ತಿಲ್ಲ.
ಸಮಂಜಸ ಕಾರಣವೇ ಇಲ್ಲದಾಗ್ಯೂ ಸುಳ್ಳು ಕಾರಣ ನೀಡಿ ಡಿವೋರ್ಸ್ ಪಡೆವಾಗ ತಪ್ಪು ತನ್ನದಿದೆ ಅಂತ ನನಗಾಗಿ ಒಪ್ಪಿಕೊಂಡವನ ಮುಖ ಎದುರು ಬಂದು ನನ್ನ ಕೆನ್ನೆಗೇ ನಾನು ನಾಲ್ಕು ರಪ ರಪನೆ ಬಾರಿಸಿಕೊಳ್ಳುವಂಥ ಗಿಲ್ಟ್ ಕಾಡುತ್ತದೆ. ಅಲ್ಲೂ ನನ್ನ ಪರವಾಗಿದ್ದು ನನ್ನನ್ನು ತನ್ನೊಳಗೆ ಉಳಿಸಿಕೊಂಡವನು ಗ್ರೇಟ್ ಅನಿಸಿ ಅವನೊಳಗೆ ಹುದುಗಿ ಕಳೆದುಹೋಗೋಣವೆನಿಸಿದರೂ ನನ್ನೂರು ನನ್ನವರೆಲ್ಲ ಎದುರಿಗೆ ಬಂದು ಕೈಗಳನ್ನು ಚಾಚಿ ನನ್ನನ್ನು ತಮ್ಮೆಡೆಗೆ ಬಾಚಿಕೊಂಡಂತೆ ಭಾಸವಾಗುತ್ತದೆ.

ತೆರಳಲಿದ್ದೇನೆ ನನ್ನ ನಾಡಿಗೆ.ಇದೇ ತಿಂಗಳು ೨೮ನೆಯ ತಾರೀಖಿನಂದು ನಿತ್ಯವೂ ನನ್ನ ದೇಶಕ್ಕೆ ಮರಳುವ ವಿಮಾನವೊಂದು ನನಗಾಗಿ ಕಾಯುತ್ತಿರುತ್ತದೆ ಎನಿಸುತ್ತಿದೆ.

ಸಮಯಗಳ ಅಂತರದಲ್ಲಿ ಕಳೆದುಕೊಂಡ ನನ್ನವರೆಲ್ಲರೂ ನನಗಾಗಿ ಕಾಯುತ್ತಿದ್ದಾರೆ. ಎರಡು ವರ್ಷಗಳ ಮೇಲೆ ಅಪ್ಪ-ಅಮ್ಮರೊಂದಿಗೆ ನಿನ್ನೆ ಮಾತಾಡಿದೆ.
ಅಮ್ಮ ಮಾಡುವ ತಂಬುಳಿ, ಅಪ್ಪನೊಂದಿಗೆ ಹಸಿರು ಹಾಸುಗಳಲ್ಲಿ ಸುತ್ತಾಟಗಳ ಕನವರಿಕೆಯಲ್ಲಿ ನನ್ನ ಹುಡುಗನ ಮಾತುಗಳನ್ನು ಮುಳುಗಿಸಿ ಕೇಳಿಯೂ ಕೇಳದವಳಂತೆ ನಾ ಬೆಳೆದ ಮಣ್ಣಿನ ವಾಸನೆಯನ್ನರಸಿ ಹೊರಟು ಬಿಡುತ್ತಿದ್ದೇನೆ. ಕೊನೆಯದಾಗಿ ಅವನಿಗೂ ಹೇಳಿದ್ದೇನೆ.
"ನನ್ನೊಡನೆಯೇ ಬದುಕುವಾಸೆಯಿದ್ದರೆ ನನ್ನ ನೆಲಕ್ಕೇ ಬಾ, ನಾ ಮಲ್ಲಿಗೆ ಬಳ್ಳಿ ನೆಡಲಿದ್ದೇನೆ ಅಲ್ಲಿ, ನೀನು ನೀರೆರೆಯಬಹುದು. ನೆಟ್ಟು ಹೂ ಬಿಟ್ಟಿದ್ದನ್ನು ನೋಡಿ ಇಬ್ಬರೂ ನಗಬಹುದು. ನಾವು ನಕ್ಕಿದ್ದನ್ನು ನೋಡುತ್ತ ನೋಡುತ್ತ ಅಪ್ಪ-ಅಮ್ಮ ಕ್ರಮೇಣ ನಿನ್ನ ಒಪ್ಪಿಕೊಳ್ಳಬಹುದು" ಅಂತ. ಅಷ್ಟೇ ಅಲ್ಲ ಹೀಗೂ ಹೇಳಿದ್ದೇನೆ " ನಂಗೆ ನೀನಿಲ್ಲದೆ ಬೇರೆ ಬದುಕಿಲ್ಲ ಕಣೋ...." ಅಂತ.
‘ಭೂಮಿ ಗುಂಡಗಿದೆ, ಹೇಗೆ ಬಂದರೂ ಸಿಕ್ಕೇ ಸಿಗುತ್ತೇವೆ ಇನ್ನೊಮ್ಮೆ’ ಅಂತ ನಾ ಹೇಳಿದರೆ "Nope, Earth is Geoid " ಅಂತ ಹೇಳಿಕೊಂಡು ಯಾವತ್ತಿನಂತೆ ನಗಲಾರದ ಸ್ಥಿತಿ ಇಬ್ಬರದೂ.

ನಾ ನೆಟ್ಟ ಬಳ್ಳಿಯ ಮಲ್ಲಿಗೆ ಕಂಪು ಅವನನ್ನು ಆವರಿಸಿ ನನ್ನೆಡೆಗೆ ಎಳೆದುಕೊಂಡು ಬರಬೇಕು ಅಂಥ ಮಲ್ಲಿಗೆಬಳ್ಳಿಯೊಂದನ್ನು ನಮ್ಮನೆಯ ಅಂಗಳದಲ್ಲಿ ಬೆಳೆಸುತ್ತೇನೆ, ಆಗವನು ನನ್ನನ್ನು ಹುಡುಕಿಕೊಂಡು ನಮ್ಮನೆಯ ಅಂಗಳದಲ್ಲಿ ನಿಲ್ಲುತ್ತಾನಲ್ಲವಾ?

ಪ್ಯಾಕಿಂಗ್ ಮಾಡುತ್ತ ಪ್ರತಿ ಬಟ್ಟೆಯ ಮಡಿಕೆಯೊಳಗೂ ಅವನಿಗಾಗಿ ಒಂದೊಂದು ಕಂಬನಿಯನ್ನು ಮುತ್ತಂತೆ ಇಟ್ಟು ಬಟ್ಟೆ ಬರೆಗಳನ್ನ ಪ್ಯಾಕ್ ಮಾಡುತ್ತಲಿದ್ದೇನೆ. ಅವನಿಷ್ಟದ ಹಾಲಿನ ಬಣ್ಣದ ಗುಲಾಬಿ ಅಂಚಿನ ಸೀರೆಯೊಂದನ್ನು ಅವನಿಗಾಗಿ ಬಿಟ್ಟು ಹೋಗುತ್ತಿದ್ದೇನೆ. ಅವ ಕೊಡಿಸಿದ ತಂಪು ಬಣ್ಣದ ಟೀ ಶರ್ಟನ್ನೂ ಹಾಗೂ ಅವನದೊಂದು ನೀಲಿಯ ಶರ್ಟನ್ನು ಮರೆಯದೇ ಬ್ಯಾಗಲ್ಲಿ ಸೇರಿಸಿಕೊಂಡಿದ್ದೇನೆ.
ತುಂಬಿದ ಬ್ಯಾಗುಗಳೊಂದಿಗೆ ಖಾಲಿ ಖಾಲಿ ಭಾವಗಳನ್ನು ಹೊತ್ತು ನಡೆಯುತ್ತಿರುವ ನನ್ನನ್ನವನು ಹಿಂಬಾಲಿಸಿ ಬರಲೆಂದು ಪ್ರಾರ್ಥಿಸಿಕೊಳ್ಳುತ್ತಾ...ನನ್ನ ನೆಲದೆಡೆಗೆ ಮುಖ ಮಾಡುತ್ತಿದ್ದೇನೆ.



[ ಹೋಗಿಬರುತ್ತೇನೆ. ತಿಂಗಳುಗಳ ಕಾಲ ನನ್ನ ಬ್ಲಾಗ್ ಮರಿಯನ್ನು ಅನಾಥವಾಗಿಸದೇ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ನಿಮ್ಮೆಲ್ಲರ ಮೇಲಿರಿಸಿ ಮರಳುತ್ತಿದ್ದೇನೆ.]

March 4, 2008

ಅಪ್ಪ ಹುಟ್ಟಿದ ದಿನಕೆ

"ಕರಾಗ್ರೇ ವಸತೇಲಕ್ಷ್ಮೀ"ಗುಣುಗುಡುತ
ಅರಳಿದ ಬೆರಳ ನಡು ಹಸ್ತ ದಿಟ್ಟಿಸಿದೆ
ಹಸ್ತದ ಚಿತ್ರದಲಿ ಅಮ್ಮಗೇನೋ ಸಡಗರವು
ಇಲ್ಲವಂತವಳಿಗೆ ಪುರುಸೊತ್ತು
ಆಡಲು ನಾಲ್ಕು ಹೆಚ್ಚುಳಿದ ಮಾತು
ಕಾರಣವೇನಿಹುದು ಕಣ್ಣರಳಿ ಕೇಳಿದೆ
ಅಮ್ಮ ನುಡಿಯುತ್ತಾಳೆ"ಏನಿಲ್ಲ ಬಿಡು.."
ಮರುಪ್ರಶ್ನೆಯಡಿ ಮರೆಸಲೆತ್ನಿಸುತ್ತಾಳೆ
"ಹೌದೇನೆ ಕವನವಿಹುದಂತೆ ‘ಕನ್ನಡಪ್ರಭ’ದಲ್ಲಿ!
ಅಪ್ಪ ಓದಿಹರಂತೆ ನಾನೂ ಓದಿಬರಲೇನೇ?"
ಪುನಃ ಪುಸಲಾಯಿಸೆ ಪುನರಾವರಿಪ ಪ್ರಶ್ನೆ
ಆದರಮ್ಮನದು ಅದೇ ಉತ್ತರ
"ಏನಿಲ್ಲ ಬಿಡು ಏನಿಲ್ಲ ಬಿಡು"

ದೇವನೆದುರು ನಾಲ್ಕೆಳೆ ಹೆಚ್ಚೇ ರಂಗೋಲೆ
ತುಪ್ಪದ ದೀಪಗಳೇಕಿಂದು ಇಷ್ಟು ನಗಬೇಕು!
ಗ್ಯಾಸೊಲೆಯೂ ಕೆಂಪಗೆ ನಲಿಯುತ್ತ ಬ್ಯುಸಿ
ಅಡುಗೆ ಮನೆ ಹರಡಿ ಸಿಹಿಸಿಹಿ ಪರಿಮಳವು
ಸಾರುತಿವೆಯಲ್ಲ ಸರ್ವ ಸಂಭ್ರಮವನ್ನು
ಇನಿತು ಸುಳಿವ ನೀಡುತ್ತಿಲ್ಲಯಾರೂ !
ನನಗಿರದ ಸಂಭ್ರಮವು ಇವಕೆ ಏನು?


ಅಮ್ಮನೆದುರಿಟ್ಟೆ ಹುಸಿಮುನಿಸನೊಂದಿಷ್ಟು
ಅಮ್ಮ ನಕ್ಕಳು ಒಗಟ ಬಿಡಿಸಿಟ್ಟು
"ಅವನೊಡನೆ ಅಲ್ಲವೇ ಆಡಿ ಬೆಳೆದದ್ದು!
ಸೋದರ ಸೊಸೆ ನಾ ಸೊಸೆಯಾಗಿ ಬಂದದ್ದು
ಹಾಗೇ ಕಣೇ ಅಂದವಗೆ ನಾ ಮಡದಿಯಾಗಿದ್ದು
ಇಂದು ಶಿವರಾತ್ರಿ ಅವರು ಹುಟ್ಟಿದ ದಿನವು
ಅದಕೇ ನೋಡು ನನಗಿಷ್ಟು ಸಂಭ್ರಮವು!
ಇಟ್ಟೆ ದೇವಗೆ ಎರಡೆಳೆ ಜಾಸ್ತಿ ರಂಗೋಲೆ
ದೀಪಕ್ಕಿಷ್ಟೇ ಇಷ್ಟು ಜಾಸ್ತಿ ತುಪ್ಪ
ನಿನಗೊಂದಿಷ್ಟು ಬೇಡವೇ ಸಿಹಿಪಾಕ ಕೂಡ
ಅವಗಾಗಿ ನಾನಿಷ್ಟೂ ನಗಬಾರದೇನೆ?
ಇರು ಇಷ್ಟು ಕೆಲಸ ಜಾಸ್ತಿಯಿಹುದಿಂದು
ಕೋರಿಬರುವೆನು ಬೇಗ ಶುಭಾಶಯವ "ನೆಂದು
ಭರದಿ ನಡೆದಳು ಅಮ್ಮ ಅಪ್ಪನನ್ನರಸಿ

ಅಮ್ಮ ನುಡಿಯುತಲಿರೆ ಅಲವತ್ತುಕೊಂಡೆ
ಮರೆಯಿಸುವ ಮರೆವಿಗೆ ಮರುಗಿಕೊಂಡೆ
"ಅಯ್ಯೋ ಅಪ್ಪಾ... ಕ್ಷಮಿಸಿಬಿಡಿ
ಡೇಟುಗಳ ಕಾಲದಲಿ ತಿಥಿ ಲೆಕ್ಕದರಿವಿಲ್ಲ
ತಿಥಿಲೆಕ್ಕವನು ನೀವು ಕಲಿಸಿಕೊಡಲೇ ಇಲ್ಲ
ಇಗೊಳ್ಳಿ ಹುಟ್ಟುಹಬ್ಬಕೆ ಶುಭಾಶಯ
ಬೊಗಸೆಯಿಂದ ವಾಪಸ್ಸು ಮುಷ್ಠಿ ಪ್ರೀತಿ
ನೀವಿತ್ತಿದ್ದರಲ್ಲಿಯೇ ನಿಮಗಿಷ್ಟು
ಇಗೊಳ್ಳಿ ಆ ಕೆನ್ನೆಗೂ ಮುತ್ತು
ಕೊಡುವಿರಲ್ಲ ಅದರೊಳಗೆ ಒಂದು ವಾಪಸ್ಸು ?"

( ಬದುಕಿನ ಹೋರಾಟದ 53ನೇ ವರ್ಷಕ್ಕೆ ಕಾಲಿಟ್ಟ ನನ್ನ ತಂದೆಯವರ ಹುಟ್ಟುಹಬ್ಬದ ಶುಭಾಶಯವನ್ನು ಈ ವರ್ಷ ಅದೆಷ್ಟೋ ಮೈಲುಗಳಾಚೆಯಿಂದ ಹೀಗೆ ಕೋರುತ್ತಿದ್ದೇನೆ)